ನಿಜಾಮ್ ಶಾಹಿ
	ದಕ್ಷಿಣ ಭಾರತದ ಬಹಮನಿ ರಾಜ್ಯ ಒಡೆದಾಗ ಸ್ಥಾಪಿತವಾದ ಐದು ಸ್ವತಂತ್ರ ಶಾಹಿ ರಾಜ್ಯಗಳ ಪೈಕಿ ಒಂದರ ಸುಲ್ತಾನ ವಂಶ. ಇದರ ರಾಜಧಾನಿ ಅಹಮದ್‍ನಗರ. ಉಳಿದ ನಾಲ್ಕು ರಾಜಮನೆತನಗಳು ಬಿಜಾಪುರದ ಅದಿಲ್‍ಶಾಹಿ, ಬೀರಾರದ ಇಮಾದ್ ಶಾಹಿ, ಗೋಲ್ಕೊಂಡದ ಖೂತ್ಬ್ ಶಾಹಿ ಮತ್ತು ಬೀದರಿನ ಬರೀದ್ ಶಾಹಿ.

	ಅಹಮದ್ ನಗರದ ನಿಜಾಮ್ ಶಾಹಿಯ ಸ್ಥಾಪಕ ಮಲಿಕ್ ಅಹಮದ್ ನಿಜಾಮ್-ಉಲ್-ಮುಲ್ಕ್. ಇವನು ಮಲಿಕ್ ಹಸನ್‍ನ ಮಗ. ಮಹಮದ್ ಗವಾನನ ಕೊಲೆಯ ನಂತರ ಮಲಿಕ್ ಹಸನ್ ಬಹಮನಿ ರಾಜ್ಯದ ರಾಜಕೀಯದಲ್ಲಿ ಮುಖ್ಯ ಪಾತ್ರ ವಹಿಸಿದ. ದಖನ್ನಿನ ಐದು ಶಾಹಿ ರಾಜ್ಯಗಳ ಸ್ಥಾಪನೆಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡಿದವನು ನಿಜಾಮ್-ಉಲ್-ಮುಲ್ಕ್. 1490ರಲ್ಲಿ ಸ್ವತಂತ್ರನೆಂದು ಘೋಷಿಸಿಕೊಂಡ ಇವನು ನಾಲ್ಕು ವರ್ಷಗಳ ಅನಂತರ ಅಹಮದ್ ನಗರವನ್ನು ಕಟ್ಟಿಸಿ ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. 1499ರಲ್ಲಿ ದೌಲತಾಬಾದನ್ನು ಗೆದ್ದು ಕೀರ್ತಿ ಗಳಿಸಿದ. ಇವನು ರಾಜಧಾನಿಯಲ್ಲಿ ಸುಂದರ ಅರಮನೆಯನ್ನು ಕಟ್ಟಿಸಿದನಲ್ಲದೆ, ಅಹಮದ್‍ನಗರ ಮತ್ತು ದೌಲತಾ ಬಾದ್‍ಗಳಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದ. ಇವನ ಆಳ್ವಿಕೆ 1599ರಲ್ಲಿ ಕೊನೆಗಂಡಿತು.

	ಈತನ ನಂತರ ಆಳಿದ ನಿಜಾಮ್ ಶಾಹಿ ಅರಸರು 1ನೆಯ ಬರಹಾನ್ ಶಹ (1509-1553), 1ನೆಯ ಹುಸೇನ್ ಶಹ (1552-1565), 1ನೆಯ ಮುರ್ತeóÁ (1565-1588), 2ನೆಯ ಬರಹಾನ್(1591-1595) ಮತ್ತು ಇಬ್ರಾಹಿಮ್ (1595-1596). ಕೇವಲ ನಾಲ್ಕು ತಿಂಗಳು ಆಳಿದ ಇಬ್ರಾಹಿಮ್ ಸತ್ತ ಮೇಲೆ ಅಹಮದ್‍ನಗರದಲ್ಲಿ ಯಾದವೀ ಕಲಹ ಆರಂಭವಾಯಿತು. 1ನೆಯ ಹುಸೇನ್ ಶಹನ ಮಗಳು ಚಾಂದ್ ಬೀಬಿ ಅದರಲ್ಲಿ ಮುಖ್ಯ ಪಾತ್ರ ವಹಿಸಿದಳು. 1596ರಲ್ಲಿ ಅಹಮದ್‍ನಗರವನ್ನು ಮುತ್ತಿ ವಶಪಡಿಸಿಕೊಳ್ಳಲು ರಾಜ್ಯವಿಸ್ತರಣಾಕಾಂಕ್ಷಿ ಅಕ್ಬರ್ ತನ್ನ ಮಗ ಮುರಾದನನ್ನು ದಖನ್ನಿಗೆ ಕಳುಹಿಸಿದ. ಚಾಂದ್ ಬೀಬಿ ಅಹಮದ್ ನಗರವನ್ನು ಮೊಗಲರ ದಾಳಿಯಿಂದ ರಕ್ಷಿಸಿದಳು. ಆದರೆ ಮೊಗಲರು ಮತ್ತೊಮ್ಮೆ ಅಹಮದ್‍ನಗರವನ್ನು ಮುತ್ತಿದಾಗ ಚಾಂದ್ ಬೀಬಿ ಮೊಗಲರಿಗೆ ಶರಣಾಗತಳಾಗ ಬಯಸಿದಳು. ಇದನ್ನು ಪಿತೂರಿಯೆಂದು ಜನರು ಭಾವಿಸಿ ಅವಳನ್ನು ಕೊಂದರು. ಅಹಮದ್‍ನಗರ ಮೊಗಲರ ವಶವಾಯಿತು. ನಿeóÁಮ್ ಶಾಹಿ ಆಡಳಿತ ಮುಕ್ತಾಯವಾಯಿತು.
(ಕೆ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ